ads

Ads

ಪರನಿಂದೆ, ವಿದ್ಯೆಯ ಅಭಿಮಾನ ನಮ್ಮನ್ನು ದೇವರಿಂದ ದೂರಮಾಡುತ್ತವೆ.

ಪರನಿಂದೆ, ವಿದ್ಯೆಯ ಅಭಿಮಾನ ನಮ್ಮನ್ನು ದೇವರಿಂದ ದೂರಮಾಡುತ್ತವೆ.

       ಪರನಿಂದೆಯಂಥ ಪಾಪವಿಲ್ಲ ನಿಂದೆ ಮಾಡುವ ಪರಿಪಾಠವು ಬಹಳ ಅನುಚಿತವಾಗಿರುತ್ತದೆ, ಅದರಿಂದ ನಮ್ಮ ಸ್ವಂತದ ಹಾನಿಯಾಗುತ್ತದೆ . ಮತ್ತೊಬ್ಬರಿಗೆ ದುಃಖವಾಗಬೇಕೆಂದು ಮನುಷ್ಯನು ಪರನಿಂದೆ ಮಾಡುತ್ತಾನೆ, ಆದರೆ ಅದನ್ನು ಕೇಳಲು ಅವನು ಅಲ್ಲಿ ಉಪಸ್ಥಿತನೆಲ್ಲಿರುತ್ತಾನೆ? ಅಂದಮೇಲೆ ಇದರಲ್ಲಿ ನಾವು ಏನು ಸಾಧಿಸಿದಂತಾಯಿತು? ನಿಂದೆಯಿಂದ ನಮ್ಮ ಮನಸ್ಸೇ ದೂಷಿತವಾಗುತ್ತದೆ. ದೂಷಿತಮನಸ್ಸು ಅಥವಾ ದುಷ್ಕರ್ಮವೇ ಮನುಷ್ಯನನ್ನು ಪರನಿಂದೆಗೆ ಪ್ರವೃತ್ತಗೊಳಿಸುತ್ತದೆ. ಯಾರಿಗೆ ಪರನಿಂದೆ  ಮಧುರವೆನಿಸುತ್ತದೋ ಅವರು ತಮಗೆ ಭಗವಂತನು ಇನ್ನೂ ಬಹಳ ದೂರವಿರುತ್ತಾನೆಂದು ತಿಳಿಯಬೇಕು. ಖಾರವು ಖಾರವೆನಿಸಿದರೆ, ಹಾವಿನ ವಿಷವು ಇಳಿಯತೊಡಗಿದ್ದರ ಲಕ್ಷಣವಾಗಿರುವಂತೆ, ಪರನಿಂದೆಯು ಮಧುರವೆನಿಸದಂತಾಯಿತಂದರೆ ದೇವರು ಹತ್ತಿರ ಬರತೊಡಗಿದನೆಂದು ತಿಳಿಯಬೇಕು. ಆದ್ದರಿಂದ ಯಾರಿಗೆ ತಮ್ಮ ಹಿತಮಾಡಿಕೊಳ್ಳಬೇಕೆಂದು ಅನಿಸುವದೋ, ಅವರು ಪರನಿಂದೆಯನ್ನು ಬಿಟ್ಟು ತಮ್ಮ ನಾಲಿಗೆಯನ್ನು ನಾಮಕ್ಕೆ ಸಮರ್ಪಿಸಿಕೊಳ್ಳಬೇಕು  ಭಗವಂತನ ಮಾರ್ಗದಲ್ಲಿ ಹೋಗುವವರು, ಮತ್ತೊಬ್ಬರಲ್ಲಿ ಕಾಣುವ ದೋಷಗಳ ಬೀಜಗಳು ನಮ್ಮಲ್ಲಿಯೇ ಇರುತ್ತವೆ ಎಂದು ತಿಳಿದುಕೊಂಡು ವ್ಯವಹರಿಸಬೇಕು ಹಾಗೂ ಅವಗುಣಗಳ ಮೂಲವನ್ನು ನಮ್ಮ ಅಂತಃಕರಣದಿಂದ ತೆಗೆದು ಹಾಕಿ, ಅಲ್ಲಿ ಭಗವಂತನ ನಾಮದ ಬೀಜವನ್ನು ಬಿತ್ತಬೇಕು.

     

         ಅನೇಕ ವೇಳೆ ನಮ್ಮ ದೋಷಗಳು ನಮಗೇ ತಿಳಿಯುತ್ತವೆ ಹಾಗೂ ಅವು ಭಗವಂತನಿಗೆ ಅಡ್ಡಬರುತ್ತವೆಂದು ಕೂಡ ತಿಳಿಯುತ್ತದೆ. ಆದರೆ ನಮಗೆ ಅವುಗಳ ವಿಷಯದಲ್ಲಿ ಏನೂ ಮಾಡಲು ಬರುವದಿಲ್ಲ. ಉದಾಹರಣೆಗೆ, ಕೆಲವು ಜನರ ದೃಷ್ಟಿಯು ಅತ್ಯಂತ ಬಾಧಕವಿರುತ್ತದೆ. ಯಾವದಾದರೊಂದು ಉತ್ತಮವಸ್ತು ಅಥವಾ ವಿಷಯಗಳನ್ನು ನೋಡಿದರೆ ಅದು ಕೂಡಲೇ ಕೆಟ್ಟುಹೋಗುತ್ತದೆ. ಇಂಥ ದೋಷಗಳು ಅವರಿಗೆ ಸ್ವತಃ ಸುಧಾರಿಸಿಕೊಳ್ಳಲು ಬರುವದಿಲ್ಲ. ಆದರೆ ಸತ್ಸಂಗತಿ ಲಭಿಸಿದರೆ ಮಾತ್ರ ಇಂಥ ದೋಷಗಳೂ ಕೂಡ ಸುಧಾರಿಸುತ್ತವೆ. ಇದೇ ಸಂತಸಂಗತಿಯ ಮಹಿಮೆಯಾಗಿರುತ್ತದೆ. ಮನುಷ್ಯನು ಸ್ವಭಾವತಃ ತನ್ನ ದೋಷ ಬೆಳೆಸುವದರ ಪ್ರಯತ್ನವನ್ನೇ ಮಾಡುತ್ತಿರುವದರಿಂದಲೇ ಜೀವನವು ಸುಖಮಯವಾಗುವದಿಲ್ಲ. ಅವನು ಮತ್ತೊಬ್ಬರ ದೋಷಗಳನ್ನು ತೋರಿಸಬಲ್ಲನು. ಆದರೆ ಅವನಿಗೆ ತನ್ನ ಸ್ವತದ ದೋಷ ತಿಳಿಯುವುದಿಲ್ಲ.

         

        ವಿದ್ಯೆಯು ಅನೇಕ ವೇಳೆ ಮನುಷ್ಯನನ್ನು ಭಗವಂತನಿಂದ ದೂರ ಒಯ್ಯುತ್ತದೆ . ವಾರಕರಿಪಂಥದಲ್ಲಿಯ ದಡ್ಡಜನರು ವಿಠಲ, ವಿಠಲ  ಅನ್ನುತ್ತ ಭಗವಂತನನ್ನು ಹೊಂದುವರು, ಆದರೆ ಜಾಣರು ಪರಮಾರ್ಥದ ಪುಸ್ತಕಗಳನ್ನು ಓದಿಯೂ ಕೂಡ ಅವನನ್ನು ಅರಿಯುವದಿಲ್ಲ. ಮನೆಯಲ್ಲಿ ಬದಾಮು ಹಾಗೂ ಉತ್ತತ್ತಿ ತುಂಬಿದ ಚೀಲಗಳನ್ನು ಇಟ್ಟಿರುತ್ತದೆ. ಆದರೂ ಆ ಪದಾರ್ಥಗಳು ನಮ್ಮ ಅಸ್ಥಿಮಾಂಸಗಳಲ್ಲಿ ಹೋಗಿ ರಕ್ತದಲ್ಲಿ ಒಂದಾಗುವವರೆಗೂ ಅವುಗಳ ಉಪಯೋಗವಾಗುವದಿಲ್ಲ. ಅದರಂತೆ ಪುಸ್ತಕೀಯ ಜ್ಞಾನದ ಪರ್ಯವಸಾನವು ಆಚರಣೆಯಲ್ಲಿ ಬರದಿದ್ದರೆ ಅದೆಲ್ಲವೂ ವ್ಯರ್ಥವಾಗುತ್ತದೆ. ಭಗವಂತನಿಗಾಗಿ ಯಾರೂ ಕಷ್ಟಪಡಬೇಕಾಗಿಲ್ಲ, ಅದು ಕಷ್ಟಸಾಧ್ಯ ವಿಷಯವಲ್ಲ. ಅದು ಸಾತ್ವಿಕ ಪ್ರೇಮದಿಂದ ಸಾಧ್ಯವಾಗುವದಾಗಿರುತ್ತದೆ ಮತ್ತು ಪ್ರೇಮದಲ್ಲಿ ಕಷ್ಟವನ್ನು ಮನುಷ್ಯನು ಕೂಡಲೇ ಮರೆತುಬಿಡುತ್ತಾನೆ. ನೀವು ಭಗವಂತನ ಪ್ರೇಮದಿಂದ ತುಂಬಿಹೋಗಿರಿ, ಅನ್ಯೋನ್ಯರಲ್ಲಿ ಪ್ರೇಮವನ್ನು ಬೆಳೆಸಿರಿ. ಅಂದರೆ ಜಗತ್ತೆಲ್ಲವೂ ಆನಂದಮಯ, ಪ್ರೇಮಮಯವಾಗಿ ಕಾಣುತ್ತದೆ ಹಾಗೂ ಕೊನೆಗೆ ನಿಮಗೆ ನಿಮ್ಮ ವಿಸ್ಮರಣೆಯಾಗುತ್ತದೆ.

    • ಮುಖ್ಯ ವಿಚಾರ-


--@--ನಿಂದೆಯು  ನಮ್ಮ ಸಾಧನೆಯನ್ನು ಸುಟ್ಟುಹಾಕುತ್ತದೆ.--@--

No comments:

ads

ads 728x90 B
Powered by Blogger.