ads

Ads

ಭಗವಂತನ ಪ್ರಾಪ್ತಿಯ ಸಾಧನಗಳು.

ಭಗವಂತನ ಪ್ರಾಪ್ತಿಯ ಸಾಧನಗಳು:


         ಭಗವಂತ ಹಾಗೂ ನಾವು ಇವರ ಮಧ್ಯದಲ್ಲಿ ಅಭಿಮಾನದ ಪರದೆಯಿರುತ್ತದೆ, ಇದು ದೂರವಾಯಿತೆಂದರೆ ನಮಗೆ ಲ್ಭಗವತ್ಪ್ರಾಪ್ತಿ   ಯಾಗುತ್ತದೆ. ಇದು ದೂರವಾಗುವದಕ್ಕೆ ಅನೇಕ ಮಾರ್ಗಗಳಿರುತ್ತವೆ. ಕರ್ಮಯೋಗ, ಹಠಯೋಗ, ರಾಜಯೋಗ ಮುಂತಾದ ಮಾರ್ಗಗಳಿಂದ ಇದು ಅಷ್ಟು ಬೇಗನೆ ದೂರವಾಗುವದಿಲ್ಲ, ಆದರೆ ಒಮ್ಮೊಮ್ಮೆ ಬೆಳೆಯ ಲೂಬಹುದು. ಭಕ್ತಿಮಾರ್ಗವು ಸುಲಭವಿರುತ್ತದೆ. ಭಕ್ತಿಯೆಂದರೆ ಭಗವಂತನಿಗೆ ಅಭಿಮಾನರಹಿತನಾಗಿ ಅನನ್ಯಭಾವನೆಯಿಂದ ಶರಣಹೋಗುವದು, ಭಗವಂತನವರಾಗಿ ಇರುವದು, ಭಗವಂತನ ಹೊರತಾಗಿ ಏನೂ ಕಾಣದಿರುವದು ಹಾಗೂ ಸರ್ವತ್ರ ಭಗವ ದಸ್ತಿತ್ವವೇ ಅನುಭವಕ್ಕೆ ಬರುವದು. ಇಂಥ ಭಕ್ತಿಯು ಪ್ರಾಪ್ತವಾಗುವ ಮಾರ್ಗವೆಂದರೆ ಸರ್ವಕರ್ತೃತ್ವವನ್ನು ಭಗವಂತನ ಕಡೆಗೆ ಕೊಡುವದು, ಎಲ್ಲವೂ ಅವನ ಇಚ್ಚೆಯಿಂದಲೇ ನಡೆಯುತ್ತದೆ ಎಂದು ತಿಳಿಯುವದು ಹಾಗೂ ನಮ್ಮ ಪ್ರತಿಯೊಂದು ಕ್ರಿಯೆಯನ್ನು ಅವನಿಗೆ ಸಮರ್ಪಣ ಮಾಡುವದು. ಹೀಗೆ ಮಾಡುವುದರಿಂದ ನಮ್ಮ ಅಭಿಮಾನವು ಬೇಗನೆ ದೂರವಾಗುತ್ತದೆ. ಇದು ಸಾಧಿಸದಿದ್ದರೆ ಗುರ್ವಾಜ್ಞೆಯಲ್ಲಿ ಇರಬೇಕು. ಅಂದರೆ ನಮ್ಮ ಮಾನ, ಅಭಿಮಾನ, ಬುದ್ಧಿವಂತಿಕೆ ಇವೆಲ್ಲವನ್ನೂ ಗಂಟುಕಟ್ಟಿಟ್ಟು, ಗುರುಗಳು ಹೇಳಿದಂತೆ ಯಾವದೇ ನೆಪಹೇಳದೆ ನಡೆಯಬೇಕು. ಇದೂ ಕೂಡ ಸಾಧಿಸದಿದ್ದರೆ, ಸಂತರ ಹತ್ತಿರ ಕೇವಲ ಬಿದ್ದುಕೊಂಡಿರಬೇಕು. ಅವರ ಉಪದೇಶದಿಂದ, ಸಹವಾಸದಿಂದ ಅಭಿಮಾನವು ನಿಧಾನವಾಗಿ ಕಡಿಮೆಯಾಗುತ್ತದೆ.

   

         ಭಕ್ತಿಯನ್ನು ಎರಡು ಪ್ರಕಾರದಿಂದ ನಿರ್ಮಾಣ ಮಾಡಿಕೊಳ್ಳಲು ಬರುತ್ತದೆ, ಮೊದಲನೇ ಪ್ರಕಾರವೆಂದರೆ ಎಲ್ಲವನ್ನು ಬಿಟ್ಟು ಕೌಪೀನಧಾರಿಗಳಾಗಿ, “ಹೇ ಭಗವಂತನೆ"  ನೀನು ನನಗೆ ಭೆಟ್ಟಿಯಾದಾಗಲೇ ಏಳುತ್ತೇನೆ”  ಎಂಬ ನಿಗ್ರಹದಿಂದ ಕುಳಿತುಕೊಳ್ಳಬೇಕು. ಈ ಮಾರ್ಗವು ಕಠಿಣವಿರುತ್ತದೆ. ಇದು ಪ್ರಾಪಂಚಿಕರಿಗೆ ಸಾಧಿಸುವದಿಲ್ಲ. ಎರಡನೆಯ ಪ್ರಕಾರವೆಂದರೆ, ಸಹವಾಸದಿಂದ ಭಕ್ತಿನಿರ್ಮಾಣ ಮಾಡಿಕೊಳ್ಳುವದು, ಭಗವಂತನ ಗುಣವರ್ಣನೆ ಓದುವದು, ಅವನ ಗುಣಗಳನ್ನೇ ಶ್ರವಣ ಮಾಡುವದು, ಅವನ ದರ್ಶನಕ್ಕೆ ಹೋಗುವದು, ಪ್ರತಿಯೊಂದು ಕೃತಿಯನ್ನು ಭಗವಂತನಿಗಾಗಿಯೇ ಮಾಡುವದು, ಪ್ರತಿಯೊಂದು ಕೃತಿಯಲ್ಲಿ ಅವನ ಸ್ಮರಣೆ ಮಾಡುವದು, ಈ ರೀತಿ ಅವನ ಅಖಂಡಸಹವಾಸ ಹೊಂದುವದರಿಂದ ಭಗವಂತನ ವಿಷಯದಲ್ಲಿ ಪ್ರೇಮ ನಿರ್ಮಾಣವಾಗುತ್ತದೆ. ವಿಷಯಕ್ಕಾಗಿ ಮಾಡಿದ ಭಕ್ತಿಯು ನಿಜವಾದ ಭಕ್ತಿಯಾಗಲಾರದು. ಭಗವತ್ಸೇವೆಯು  ನಿಷ್ಕಾಮವಾಗಿರಬೇಕು, ಏಕೆಂದರೆ ಭಕ್ತಿಯೆಂದರೆ ಸಂಲಗ್ನವಾಗುವದು. ನಾನು ವಿಷಯದೊಂದಿಗೆ ಸಂಲಗ್ನವಾಗಿರುತ್ತೇನೆ. ಆದ್ದರಿಂದ ಅದು ವಿಷಯದ ಭಕ್ತಿಯಾಗಿರುತ್ತದೆ, ಭಗವಂತನದಾಗುವದಿಲ್ಲ. ಆದ್ದರಿಂದ ನಾವು ಮಾಡುವದು ಭಗವಂತನ ಸೇವೆಯಾಗದೆ ವಿಷಯದಸೇವೆ ಎಂಬುವದು ನಿಶ್ಚಿತವಾದಂತಾಯಿತು, ಅಂದರೆ ನಾನು ವಿಷಯದ ಗುಲಾಮನಾದೆನು. ವಿಷಯಗಳ ಗುಲಾಮನಾಗಿ ನಾನು ವಿಷಯಗಳನ್ನು ಹೇಗೆ ಅನುಭವಿಸಬಲ್ಲೇ? ನಾವು ಒಡೆತನದಿಂದ ವಿಷಯಗಳನ್ನು ಅನುಭವಿಸಬೇಕು. ಸಂತ, ಭಗವಂತ ಇವರು ನಿರತಿಶಯ ಸುಖ ಕೊಡುವವರಿರುತ್ತಾರೆ. ಅವರ ಹತ್ತಿರ ವಿಷಯವನ್ನು ಬೇಡಿದೆವೆಂದರೆ  ರಾಮನ ಹತ್ತಿರ ಭಿಕ್ಷೆಯ ಜೋಳಿಗೆ ಬೇಡಿದಷ್ಟೇ ಹುಚ್ಚುತನದ್ದಾಗುವದಿಲ್ಲವೆ? ನಾವು ಸೇವೆಯ ಫಲವನ್ನು ಅಪೇಕ್ಷಿಸಿ ಭಗವಂತನನ್ನು ದೂರ ಮಾಡುತ್ತೇವೆ. ಭಗವಂತನ ಪ್ರಾಪ್ತಿಯೇ ನಮ್ಮ ಜೀವನದ ಧ್ಯೇಯವೆಂಬುದನ್ನು ನಿಶ್ಚಯಿಸಿ, ನಾವು ಯಾವಾಗಲೂ ಅದರ ಸುತ್ತಲೂ ಸುತ್ತುತ್ತಿರಬೇಕು. ಭಗವಂತನಲ್ಲಿ ಲೀನವಾದವೆಂದರೆ ತಿರುಗಿ ಬರುವದಿಲ್ಲವೆಂಬುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.



  *ಮುಖ್ಯ ವಿಚಾರ*  

  

 ಭಗವಂತನ ಪ್ರಾಪ್ತಿಗೆ ಅಡ್ಡ ಬರುವ ವಿಷಯವು ದೂರವಾಗಬೇಕೆಂಬ ತಳಮಳವು ಯಾರಿಗೆ ಹತ್ತುತ್ತದೆಯೋ ಅವರ ಸಾಧನೆಯು ಸರಿಯಾಗಿ ನಡೆದಿರುತ್ತದೆ.

No comments:

ads

ads 728x90 B
Powered by Blogger.